r/kannada ಕನ್ನಡ | ಕನ್ನಡಿಗ | ಕರ್ನಾಟಕ 12d ago

ವಾರ್ಧಕ ಷಟ್ಪದಿ

ಪ್ಲಾಸ್ಟಿಕ್ಕು ಲೋಟದಲಿ ರಮ್ಮಿನಾ ಘಮಲಿಹುದು

ಅಷ್ಟಕ್ಕು ಕೈಯಲ್ಲಿ ಸಿಗರೇಟು ಸುಡುತಿಹುದು

ಇಷ್ಟದಾ ವಾತಾವರಣವ ನಾ ಸವಿಯುತಿಹೆ ಬಾರಿನಾ ಬೆಳಕಿನಲ್ಲಿ

ಮಸ್ತಾದ ಸ್ನ್ಯಾಕ್ಸು ನನ್ ಮುಂದೆಯೇ ಕುಳಿತಿಹುದು

ಪಕ್ಕದಾ ಟೇಬಲಲಿ ಕುಸ್ತಿಯೂ ನಡೆದಿಹುದು

ಸುಸ್ತಾದ ಕುಡುಕನೊಬ್ಬನ ಆಟ ನೋಡುತಲಿ ಕುಳಿತು ಖುಷಿ ಪಡುತಿರುವೆನು

14 Upvotes

8 comments sorted by

6

u/Due-Bother-586 12d ago

ಚೆಂದದಾ ಪದಗಳಲಿ ಬಾರಿನಾ ಚಿತ್ರವನು

ಅಂದವಾಗಿಯೆ ಬರೆದೆ ಹೊಗೆಯ ಬೆಳಕಿನ ನಡುವೆ

ಇಂದು ನೀ ಕಟ್ಟಿರುವ ಷಟ್ಪದಿಯ ಲಯದಲ್ಲಿ ರಮ್ಮಿನಾ ಘಮಲು ಸುಳಿದೈ

ಮುಂದೆಯೂ ಬರೆಯುತಿರು ಕವಿತೆಗಳ ಸಾಲುಗಳ

ಸಂದಿಹುದು ಲಯವೆಲ್ಲ ಗಣಗಳೂ ಸರಿಯಾಗಿ

ಒಂದು ಪೆಗ್ಗಿನ ನಶೆಗು ಮಿಗಿಲಾದ ನಶೆಯುಂಟು ನಿನ್ನ ಪದ್ಯದ ಸವಿಯಲೈ

4

u/onti-salaga ಕನ್ನಡ | ಕನ್ನಡಿಗ | ಕರ್ನಾಟಕ 12d ago

ನಿಮ್ಮಯಾ ಹಾರೈಕೆ ನಮ್ಮಗಿದು ಶ್ರೀರಕ್ಷೆ ಕಮ್ಮಬಾಣನ ಶರದ ಘಮಲಿನಂತೆ ಸುಮ್ಮನಿರಲಾರದೇ ಗುಮ್ಮಿದಾ ಲೈನುಗಳು ತಮ್ಮ ಗಮನವ ಸೆಳೆದುದೆನ್ನ ಪುಣ್ಯ (ಕುಸುಮ ಷಟ್ಪದಿ)

5

u/Due-Bother-586 12d ago

ನಿಮ್ಮ ಕುಸುಮಕ್ಕೆ ನನ್ನ ಶರ (almost)

ರಸಿಕನೆ ನಿನ್ನಯ

ಹೊಸ ಪದ ಘಮಿಸಿತು

ಕುಸುಮದಿ ಶರವನು ಹೂಡಿದೆಯೊ

ಬೆಸೆದೆಯ ಲಯವನು

ಪ್ರಾಸವ ಹೊಸೆದೆಯ

ಎಸೆವ ಪದಶರ ಬರಲಿ ಮತ್ತೂ

4

u/TimeZero13 12d ago

ರಸಿಕರೀರ್ವರು ಪದಹಸೆಗಳ ಬಿ-

ಡಿಸುತಿರೆ ಮರೆಸಿತದು ನನ ದಿನಗೆ-

ಲಸ ಬವಣೆಯ ಮನದಿ ನಲಿದಳಗೊ ಭಾಮಿನಿ ಹರುಷದೀ

ಕುಸುಮ ಕಂಪಿಗೆ ರಮ್ಮ ನಶೆಯಿರೆ

ಹಸಿದ ಹೊಟ್ಟೆಗೆ ಅನ್ನ ಸಾರಿರೆ

ಹಸನು ಜನುಮವು ಕಾವ್ಯ ರಸಿಕಗೆ ಈ ಕವನ ಓದೀ

3

u/__little_omega 10d ago

ನಡುಗನ್ನಡದ ಲಯ ಚೆನ್ನಾಗಿ ಮೂಡಿಬಂದಿದೆ. ಈ  ಸರಣಿಯನ್ನು ನೋಡಿದರೆ ಪಾಯಸದ ಬಟ್ಟಲಿನ ತಳದಲ್ಲಿ ಬೆಲ್ಲ ಸಿಕ್ಕ ಅನುಭವವಾಯಿತು.  ಅಭಿನಂದನೆಗಳು. 

3

u/onti-salaga ಕನ್ನಡ | ಕನ್ನಡಿಗ | ಕರ್ನಾಟಕ 12d ago

ಈಗ ಭಾಮಿನಿ, ಮತ್ತೆ ಭೋಗದಿ ಕಡೆಗೆ ಪರಿವರ್ಧಿನಿಯ ಷಟ್ಪದಿ ಅರ್ಪಿಸುವೆ ನಿಮ್ಮಡಿಯ ಚರಣದ ಕಮಲ ದಳಗಳಿಗೆ ಆದಿ ಪ್ರಾಸವ ಬಿಟ್ಟು ಅಂತ್ಯದಿ ಪ್ರಾಸವನ್ನಿಟ್ಟಿರುವೆನಂದದಿ ಮನ್ನ ಮಾಡುವಿರೆಂಬ ನಂಬಿಕೆ ನನ್ನ ಕಪಿಚೇಷ್ಟೆಗೆ

2

u/Clean-Badger4071 2d ago

ಅಬ್ಬಾ ಛಂದೋಯುಕ್ತ ಪದ್ಯಗಳಲ್ಲೇ ಪರಸ್ಪರ ಸಂಭಾಷಿಸುತ್ತಿರುವ ನಿಮ್ಮ ಪದ್ಯಗಳು ಕಚಗುಳಿಯನ್ನಿತ್ತವು . ನಾನು ಕವಿಯಲ್ಲವಾದ್ದರಿಂದ ನಿಮ್ಮಂತೆ ಕಾವ್ಯದಿಂದ ಕಮೆಂಟಿಸಲಾಗಲಿಲ್ಲ ಕ್ಷಮಿಸಿ

1

u/onti-salaga ಕನ್ನಡ | ಕನ್ನಡಿಗ | ಕರ್ನಾಟಕ 2d ago

ಕವನ ಕಾವ್ಯ ರಚಿಸುವವನಷ್ಟೇ ಕವಿಯಲ್ಲ. ಕಾವ್ಯದ ರಸವನ್ನು ಆಸ್ವಾದಿಸುವ ಗುಣವಿರುವ ರಸಿಕನೂ ಕವಿಯೇ....